ಬೆಂಗಳೂರು: ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಗೋಸುಂಬೆ ರಾಜಕೀಯ ಮಾಡುತ್ತಿದ್ದು, ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರರು ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಲಾಭ ಇದ್ದರೆ ಮಾತ್ರ ದಲಿತರು, ರೈತರ ಬಗ್ಗೆ ಪ್ರೀತಿ ತೋರಿಸುತ್ತದೆ. ತಮ್ಮ ಆಡಳಿತ ಇರುವ ಕಡೆ ಅದು ದೌರ್ಜನ್ಯಗಳ ವಿರುದ್ಧ ಮಾತನ್ನೇ ಆಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ ಎಂದು ವಿವರಿಸಿದರು.
ದಲಿತರು, ರೈತರ ಬಗ್ಗೆ ನಕಲಿ ಪ್ರೀತಿ ತೋರಿಸುವ ಕಾಂಗ್ರೆಸ್ಸಿಗರು ತಮ್ಮ ಪಕ್ಷ ಆಡಳಿತ ಇರುವ ರಾಜ್ಯದಲ್ಲಿ ಬಾಯಿ ಮುಚ್ಚಿ ಕುಳಿತಿರುತ್ತಾರೆ. ಸುಮಾರು 7 ದಶಕಗಳ ಕಾಲ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್, ದಲಿತರ ಸಬಲೀಕರಣಕ್ಕೆ ಪ್ರಯತ್ನ ಮಾಡಲೇ ಇಲ್ಲ ಎಂದರು.
ರಾಜಸ್ಥಾನದಲ್ಲಿ ಒಂದು ವರ್ಷದಲ್ಲಿ 80 ಸಾವಿರ ಮಹಿಳೆಯರು ಮತ್ತು ದಲಿತರ ವಿರುದ್ಧ 12 ಸಾವಿರ ಅತ್ಯಾಚಾರದ ಕೇಸ್‍ಗಳು ದಾಖಲಾಗಿವೆ. ಹೀಗಿದ್ದರೂ ಉತ್ತರ ಪ್ರದೇಶದಲ್ಲಿ ಹೋರಾಟ ಮಾಡುವ ಕಾಂಗ್ರೆಸ್ಸಿಗರು ರಾಜಸ್ಥಾನದಲ್ಲಿ ತಮ್ಮ ಪಕ್ಷ ಆಡಳಿತ ಮಾಡುವ ಕಾರಣ ಅಲ್ಲಿಗೆ ತೆರಳಿ ಪ್ರತಿಭಟನೆ ಮಾಡುತ್ತಿಲ್ಲ ಎಂದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬೆಂಬಲಿಸಿದ ಕಾರಣಕ್ಕಾಗಿ ದಲಿತರು, ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಆದರೆ, ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದ ಮುಖಂಡರು ಆಕೆಯ ಕಾರ್ಯಕರ್ತರ ದೌರ್ಜನ್ಯವನ್ನು ಖಂಡಿಸಿಲ್ಲ. ಪಶ್ಚಿಮ ಬಂಗಾಲದಲ್ಲಿ ದಲಿತರಿಗೆ ಆದ ಅನ್ಯಾಯದ ಬಗ್ಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಅವರು ಟ್ವೀಟ್ ಮಾಡಿಲ್ಲ ಎಂದು ಅವರು ವಿವರಿಸಿದರು.
ದೆಹಲಿ ರೈತರ ಹೋರಾಟಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಮಾತುಕತೆ ನಡೆಸುತ್ತಿದೆ ಉತ್ತರ ಪ್ರದೇಶದಲ್ಲಿ ಆದ ದುರ್ಘಟನೆ ಕುರಿತು ಕ್ರಮ ಕೈಗೊಳ್ಳುವುದಾಗಿ ಪಕ್ಷದ ರಾಷ್ಟ್ರಾಧ್ಯಕ್ಷರಾದ ಜೆ.ಪಿ.ನಡ್ಡಾ ಅವರೇ ಹೇಳಿದ್ದಾರೆ. ಆದರೆ, ರಾಜಸ್ಥಾನ ಮತ್ತಿತರ ಕಡೆಗಳಲ್ಲಿ ಆದ ಅತ್ಯಾಚಾರ, ದಲಿತರ ಮೇಲಿನ ದೌರ್ಜನ್ಯದ ಕುರಿತು ಕಾಂಗ್ರೆಸ್ ಮುಖಂಡರು ಮೌನವಾಗಿಯೇ ಇದ್ದಾರೆ ಎಂದು ತಿಳಿಸಿದರು.
ರಾಜಸ್ಥಾನದ ದುರ್ಘಟನೆಗಳ ಸಂಬಂಧ ಕ್ರಮಕ್ಕೆ ಸೂಚಿಸಿ ಮಾನವ ಹಕ್ಕುಗಳ ಆಯೋಗವು ಸರಕಾರ, ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಕೊಟ್ಟಿದೆ. ಮಹಾರಾಷ್ಟ್ರದಲ್ಲಿ ದಲಿತರ ಮೇಲೆ ದೌರ್ಜನ್ಯ, ಕೊಲೆ ಆದರೆ ಅದರ ಬಗ್ಗೆ ಕಾಂಗ್ರೆಸ್ ಉಸಿರೆತ್ತುವುದಿಲ್ಲ. ರಾಜ್ಯದಲ್ಲೂ ಮುಸ್ಲಿಮರಿಂದ ಅತ್ಯಾಚಾರ ನಡೆದರೆ ಕಾಂಗ್ರೆಸ್ ನಾಯಕರು ಆ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಒಬ್ಬರಿಗೊಂದು ಇನ್ನೊಬ್ಬರಿಗೆ ಮತ್ತೊಂದು ಎಂಬ ಜಾಯಮಾನ ಹೊಂದಿಲ್ಲ. ರಾಜಕೀಯ ಲಾಭ ಇದ್ದರೆ ಮಾತ್ರ ಕಾಂಗ್ರೆಸ್ ಪ್ರತಿಭಟನೆಗೆ ಇಳಿಯುತ್ತದೆ. ದ್ವಂದ್ವ ನೀತಿಯಿಂದಲೇ ಕಾಂಗ್ರೆಸ್ ಪಕ್ಷ ಈ ದುಸ್ಥಿತಿಗೆ ಇಳಿದಿದೆ. ಖಾಯಂ ಅಧ್ಯಕ್ಷರೇ ಇಲ್ಲದ ಪಕ್ಷವದು ಎಂದು ವಿವರಿಸಿದರು.
ಕಾಂಗ್ರೆಸ್ಸಿಗರು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಿ ಮುಸ್ಲಿಮರು ಮತ್ತು ದಲಿತರನ್ನು ಭಯಭೀತರನ್ನಾಗಿ ಮಾಡಿದ್ದರು. ಬಿಜೆಪಿಯಿಂದ ದೂರವಿದ್ದ ದಲಿತರು ಈಗ ಬಿಜೆಪಿ ಪರವಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಮಾತನಾಡಿ, ಬೌದ್ಧಿಕ ದಿವಾಳಿತನ ಹೊಂದಿದ ಕಾಂಗ್ರೆಸ್. ಡೋಂಗಿ ಜಾತ್ಯತೀತವಾದ, ದಲಿತರ ಬಗ್ಗೆ ಕಾಂಗ್ರೆಸ್‍ನ ಡೋಂಗಿ ಪ್ರೇಮವನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಡಾ. ಅಂಬೇಡ್ಕರರನ್ನು ನಿರಂತರ ಅವಮಾನ ಮಾಡಿದ್ದ ಪಕ್ಷ ಕಾಂಗ್ರೆಸ್. ದಲಿತರ ಕುರಿತು ಕಾಂಗ್ರೆಸ್ ಪಕ್ಷದವರಿಗೆ ನೈಜ ಪ್ರೇಮ ಮತ್ತು ಕಳಕಳಿ ಇಲ್ಲ. ದೆಹಲಿಯಲ್ಲಿ ಡಾ, ಅಂಬೇಡ್ಕರ್ ಅವರಿಗೆ ಶವಸಂಸ್ಕಾರ ಮಾಡಲು ಸ್ಥಳ ನೀಡದ ಕಾಂಗ್ರೆಸ್ ಪಕ್ಷಕ್ಕೆ ದಲಿತರ ಬಗ್ಗೆ ಮಾತನಾಡಲು ಏನು ಹಕ್ಕಿದೆ ಎಂದು ಪ್ರಶ್ನಿಸಿದರು.
ಬಾಬು ಜಗಜೀವನರಾಂ ಸೇರಿದಂತೆ ಅನೇಕ ದಲಿತ ನಾಯಕರಿಗೆ ಮೋಸ ಮಾಡಿದ ಪಕ್ಷವದು. ಕಾಶ್ಮೀರದ ಪಂಡಿತರು, ಶಿಕ್ಷಕರ ಹತ್ಯೆಗಳ ಕುರಿತು ಕಾಂಗ್ರೆಸ್ ಚಕಾರ ಎತ್ತುವುದಿಲ್ಲ. ಆದರೆ, ನಮ್ಮ ಸರಕಾರ 370ನೇ ವಿಧಿಯನ್ನು ರದ್ದು ಮಾಡಿದೆ. ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲರಿಗೂ ನ್ಯಾಯ ದೊರಕಿಸಿ ಕೊಟ್ಟಿದೆ ಎಂದರು.
ಸಂಸತ್ತಿನ ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್ ಪಕ್ಷ ತನ್ನ ಗೋಸುಂಬೆ ನೀತಿಯನ್ನು ಪ್ರದರ್ಶಿಸಿದೆ. ಆದರೆ ನಮ್ಮ ಸರಕಾರ ದೇಶದ ಸರ್ವರ ಅಭ್ಯುದಯಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಕೇಂದ್ರದ ವಿಜ್ಞಾನಿಗಳ ತಂಡ ಕಲಬುರ್ಗಿ ಮತ್ತು ಸಮೀಪದ ಜಿಲ್ಲೆಗಳಲ್ಲಿ ಭೂಕಂಪನದ ಕುರಿತು ಶೀಘ್ರವೇ ಅಧ್ಯಯನ ಕೈಗೊಳ್ಳಲಿದೆ. ಭೂಕಂಪನ ಆಗುವ ಚಿಂಚೋಳಿ ತಾಲ್ಲೂಕಿನ ಗಡಿಕೇರ ಗ್ರಾಮಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿ ವಾಸ್ತವ್ಯ ಇರಲಿದ್ದಾರೆ ಹಾಗೂ ಜನರಲ್ಲಿ ಭಯವನ್ನು ದೂರ ಮಾಡಲಿದ್ದಾರೆ ಎಂದರು.
ವಿಜ್ಞಾನಿಗಳ ತಂಡದಿಂದ ಒಂದು ತಿಂಗಳೊಳಗೆ ವಿಸ್ತøತ ವರದಿ ಸಿಗಲಿದೆ. ಜನರನ್ನು ಭಯಮುಕ್ತರನ್ನಾಗಿ ಮಾಡಲಾಗುವುದು. ಅಗತ್ಯ ಸೌಕರ್ಯವನ್ನೂ ಕಲ್ಪಸಲು ಸರಕಾರ ಬದ್ಧವಿದೆ ಎಂದು ತಿಳಿಸಿದರು. ವಾಸಯೋಗ್ಯವಲ್ಲದ ಮನೆಗಳನ್ನು ಕೆಡವಿ ಬೇರೆ ಮನೆ ನಿರ್ಮಿಸಿಕೊಡಲು ಸರಕಾರ ಮುಂದಾಗಲಿದೆ ಎಂದು ತಿಳಿಸಿದರು.
ಸಂಸದರಾದ ಉಮೇಶ್ ಜಾಧವ್ ಅವರು ಮಾತನಾಡಿ, ನಾನು ಶಾಸÀಕನಾಗಿದ್ದಾಗ ಭೂಕಂಪನ ಆಗುವ ಪ್ರದೇಶಕ್ಕೆ ಹೋಗಿ ವಾಸ್ತವ್ಯ ಮಾಡಿದ್ದೆ. ನಿನ್ನೆ ಕೂಡ ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿ ಮತ್ತಿತರ ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ ಎಂದರು. ದೆಹಲಿಯ ವಿಜ್ಞಾನಿಗಳ ತಂಡ ಅಧ್ಯಯನ ಮಾಡಿ ವರದಿ ಕೊಡಲಿದೆ ಎಂದು ತಿಳಿಸಿದರು.
ರಾಜ್ಯ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ