ಬೆಂಗಳೂರು : ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರು 2001ರಲ್ಲಿ ನಡೆದ ಒಂದು ಘಟನೆ ಹಾಗೂ ಅದರ ಬಗ್ಗೆ ಮಾನ್ಯ ಸಂಸದರಾದ ಸುಬ್ರಹ್ಮಣ್ಯನ್ ಸ್ವಾಮಿ ಅವರು ಝೀ ನ್ಯೂಸ್‍ಗೆ ಕೊಟ್ಟ ಹೇಳಿಕೆ ಮತ್ತು ಅದನ್ನು ಆಧರಿಸಿ ಅನೇಕ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ವರದಿ ಆದ ಸುದ್ದಿಯನ್ನು ಒಂದು ವಾಕ್ಯದಲ್ಲಿ ಹೇಳಿದ್ದಾರೆ. ಅದನ್ನು ನೆಪವಾಗಿ ಇಟ್ಟುಕೊಂಡು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವರ್ತನೆ ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಯ ಸಂಸದರಾದ ಸುಬ್ರಹ್ಮಣ್ಯನ್ ಸ್ವಾಮಿ ಅವರು ಝೀ ನ್ಯೂಸ್‍ನಲ್ಲಿ ಹೇಳಿಕೆ ನೀಡುತ್ತ “2001ರಲ್ಲಿ ರಾಹುಲ್ ಗಾಂಧಿ ಅವರನ್ನು ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿತ ಪ್ರಕರಣಗಳಲ್ಲಿ ಅಮೆರಿಕದಲ್ಲಿ ಫೆಡರಲ್ ಬ್ಯೂರೊ ಆಫ್ ಇನ್‍ವೆಸ್ಟಿಗೇಷನ್ (ಎಫ್‍ಬಿಐ) ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 1.60 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಮಾದಕ ವಸ್ತು ಹೊಂದಿದ್ದ ಆರೋಪ ಅವರ ಮೇಲಿತ್ತು. ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಯುಪಿಎ ಅಧ್ಯಕ್ಷೆಯಾಗಿದ್ದ ಶ್ರೀಮತಿ ಸೋನಿಯಾ ಗಾಂಧಿ ಅವರ ವಿನಂತಿಯ ಮೇರೆಗೆ ಅಂದಿನ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ವಾಜಪೇಯಿಯವರು ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಜೊತೆ ಮಾತನಾಡಿ, ರಾಹುಲ್ ಗಾಂಧಿಯವರಿಗೆ ಬಿಡುಗಡೆಯ ಭಾಗ್ಯ ಒದಗಿಸಿದ್ದರು” ಎಂದು ತಿಳಿಸಿದ್ದು ಇದು ಪತ್ರಿಕೆಗಳು, ಮಾಧ್ಯಮಗಳಲ್ಲಿ ವರದಿಯಾಗಿತ್ತು ಎಂದರು.
“ಇದ್ದದ್ದನ್ನು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದರಂತೆ” ಎಂಬ ಗಾದೆಮಾತಿನಂತಾಗಿದೆ ಕಾಂಗ್ರೆಸ್‍ನ ಪರಿಸ್ಥಿತಿ ಎಂದ ಅವರು, ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಈ ಕುರಿತಂತೆ ಚಕಾರ ಎತ್ತಿಲ್ಲ. ಆದ್ದರಿಂದ ಇದು ಸತ್ಯ ಎಂದು ಅನಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ಒಂದು ಕುಟುಂಬದ ಅಡಿಯಾಳಾಗಿ ಗುಲಾಮಿ ಮಾನಸಿಕತೆ ಹೊಂದಿರುವ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ಮಾಡಿ ಖುಷಿ ಪಡಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಅವರ ಪ್ರತಿಭಟನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ನುಡಿದರು.
ಕಾಂಗ್ರೆಸ್ ಪಕ್ಷ ಐತಿಹಾಸಿಕ ಸತ್ಯಗಳಿಂದ ಪಾಠ ಕಲಿಯುವುದಿಲ್ಲ. ಯಾವುದೇ ರಚನಾತ್ಮಕ ಹೋರಾಟ, ಜನಪರ ಹೋರಾಟ ಕೈಗೆತ್ತಿಕೊಳ್ಳುವುದಿಲ್ಲ. ಕೇವಲ ಜಾತಿ, ಮತ, ಪ್ರಾಂತ ಎಂದು ಒಡೆದಾಳುವ ಮತ ಗಳಿಕೆ ನೀತಿ ಅದರದು. ಅದರಿಂದಲೇ ಸುದೀರ್ಘ ಕಾಲ ಕಾಂಗ್ರೆಸ್ ಪಕ್ಷದವರು ದೇಶವನ್ನು ಆಳ್ವಿಕೆ ಮಾಡಿದ್ದಾರೆ ಎಂದರು. ಅಧಿಕಾರದ ಹಪಾಹಪಿತನಕ್ಕೆ ಈ ರೀತಿಯ ಹೇಳಿಕೆಯನ್ನು ಅವರು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸ್ವಾರ್ಥರಹಿತ ಮತ್ತು ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತೊಡಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಟೀಕಿಸುವ ಕೀಳು ಪ್ರವೃತ್ತಿಗೆ ಕಾಂಗ್ರೆಸ್ಸಿಗರು ಇಳಿದಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರ ಆಯ್ಕೆ ಆ ಪಕ್ಷದೊಳಗೆ ಕಗ್ಗಂಟಾಗಿದೆ. ಈ ಹುದ್ದೆಗಾಗಿ ಇವತ್ತು ತಾಯಿ -ಮಗನ ನಡುವೆ ಪೈಪೋಟಿ ಇದೆ. ಕಾಂಗ್ರೆಸ್ ಪುನಶ್ಚೇತನಕ್ಕಾಗಿ ಪ್ರಯತ್ನ ಮಾಡುವ ಜಿ 23 ನಾಯಕರನ್ನು ಹೊರಗಟ್ಟಿ, ಕೇವಲ ಗಾಂಧಿ ಕುಟುಂಬದ ನಾಯಕರು ಮಾತ್ರ ತಮ್ಮ ಪಕ್ಷದ ಚುಕ್ಕಾಣಿ ಹಿಡಿಯಬೇಕೆಂಬ ಹಾಗೂ ಹೊಗಳುಭಟ್ಟಂಗಿಗಳ ಗುಂಪಿಗೆ ಸೀಮಿತವಾದ ಪಕ್ಷ ಅದಾಗಿದೆ ಎಂದರು.
ಬಿಜೆಪಿ, ಪಕ್ಷದ ಸಂವಿಧಾನದ ಆಧಾರದಲ್ಲಿ ರಾಷ್ಟ್ರಾಧ್ಯಕ್ಷರ, ಇತರ ಘಟಕಗಳ ಅಧ್ಯಕ್ಷರ ಆಯ್ಕೆಯನ್ನು ಸಕಾಲದಲ್ಲಿ ನಡೆಸುತ್ತಿದೆ. ಆಂತರಿಕ ಪ್ರಜಾಪ್ರಭುತ್ವ ಅಲ್ಲಿದೆ. ನಮ್ಮ ಪಕ್ಷ ನೋಡಿ ಅವರು ಪಾಠ ಕಲಿಯಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಅಶ್ವತ್ಥನಾರಾಯಣ ಅವರು ಮಾತನಾಡಿ, ಉಪ ಚುನಾವಣೆ ಬಂದೊಡನೆ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ದೇವೇಗೌಡರು ತಮ್ಮ ಮನಸ್ಥಿತಿ ಕಳಕೊಂಡು ಮಾತನಾಡುತ್ತಾರೆ. ಸಿಂದಗಿ, ಹಾನಗಲ್ ಚುನಾವಣೆ ಬಂದ ಬಳಿಕ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ಕೂಗುಮಾರಿಗಳ ರೀತಿಯಲ್ಲಿ ಜವಾಬ್ದಾರಿರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಆರೆಸ್ಸೆಸ್ ಬಗ್ಗೆ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಆರೆಸ್ಸೆಸ್ ಮಾರ್ಗದರ್ಶನದಿಂದ ಗೆದ್ದ ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದನ್ನು ಮರೆತಿದ್ದಾರೆ. ಆಗ ಆರೆಸ್ಸೆಸ್ ಚಟುವಟಿಕೆ ಬಗ್ಗೆ ಅವರಿಗೆ ಪರಿಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ಬ್ಲೂಫಿಲ್ಮ್ ಬಗ್ಗೆ ಕುಮಾರಸ್ವಾಮಿಯವರಿಗೆ ಯಾರು ತಿಳಿಸಿಕೊಟ್ಟರು, ನೀವು ಎಲ್ಲಿಂದ ಕಲಿತುಕೊಂಡಿರಿ ಎಂದು ಕೇಳಿದ ಅವರು, ಕುಮಾರಸ್ವಾಮಿಯವರಿಗೆ ಕೇವಲ ಒಂದು ಲೋಕವಲ್ಲ. ಅವರಿಗೆ ಎರಡು ಲೋಕವಿದೆ. ರಾಜಕೀಯ ಕ್ಷೇತ್ರದಲ್ಲಿ ನಮ್ಮೆಲ್ಲರಿಗೂ ಒಂದು ಲೋಕವಿದ್ದರೆ ನಿಮಗೆ ಎರಡೆರಡು ಕ್ಷೇತ್ರವಿದೆ. ನೀವು ಬಣ್ಣದ ಲೋಕದಿಂದ ಬಂದಂಥವರು. ಮುಖ್ಯಮಂತ್ರಿಯಾಗಿದ್ದಾಗ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ರಾಜಕಾರಣ ನಡೆಸಿದವರು ನೀವು ಎಂದರು. ಆರೆಸ್ಸೆಸ್ ಬಗ್ಗೆ ತಮ್ಮ ಹುದ್ದೆಗೆ ಗೌರವ ತರದ ಹೇಳಿಕೆಗಳನ್ನು ಅವರು ಕೊಡುತ್ತಿದ್ದಾರೆ ಎಂದರು.
ಪ್ರಧಾನಿಗಳ ಬಗ್ಗೆ ಸಿದ್ದರಾಮಯ್ಯರವರು ಹಗುರವಾಗಿ ಮಾತನಾಡುವುದು, ಆರೆಸ್ಸೆಸ್ ಕುರಿತು ಕುಮಾರಸ್ವಾಮಿಯವರು ಹಗುರವಾದ ಹೇಳಿಕೆ ಕೊಡುವುದು ಸಲ್ಲ. ಇಂಥ ಹೇಳಿಕೆಗಳನ್ನು ಜನರು ಒಪ್ಪುವುದಿಲ್ಲ. ಇವೆರಡೂ ಪಕ್ಷಗಳನ್ನು ಸಿಂದಗಿ, ಹಾನಗಲ್‍ನ ಜನತೆ ತಿರಸ್ಕರಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು. ಅಲ್ಪಸಂಖ್ಯಾತರ ಮತಗಳಿಗಾಗಿ ಇವರಿಬ್ಬರು ಸ್ಪರ್ಧೆಯಿಂದ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕುಮಾರಸ್ವಾಮಿಯವರು ಆರೆಸ್ಸೆಸ್ ಕುರಿತ ಹೇಳಿಕೆಯನ್ನು ಹಿಂದಕ್ಕೆ ಪಡೆದು ಆರೆಸ್ಸೆಸ್‍ನ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು. ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ