ಬೆಂಗಳೂರು: ರಾಜ್ಯದಲ್ಲಿ 83% ಜನರಿಗೆ (4.15 ಕೋಟಿ ಜನರು) ಕೋವಿಡ್ ಮೊದಲನೇ ಲಸಿಕೆ ಕೊಡಲಾಗಿದೆ. 2.05 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ರಾಜ್ಯದ ಸಹಕಾರ ಸಚಿವರಾದ ರಾಜ್ಯದ ಉನ್ನತ ಶಿಕ್ಷಣ, ಐಟಿ, ಬಿಟಿ & ಎಸ್‍ಟಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ|| ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.
ಮಲ್ಲೇಶ್ವರದ ಕಬಡ್ಡಿ ಮೈದಾನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಜೀವನ ಎಂದಿನಂತೆ ನಡೆಯಲು ಆರೋಗ್ಯ ಸಚಿವರು ಮತ್ತು ಸಚಿವಸಂಪುಟ ಶ್ರಮಿಸಿದೆ. ಆರ್ಥಿಕ ವಹಿವಾಟು ಕೋವಿಡ್‍ಪೂರ್ವ ಅವಧಿಗಿಂತ ಹೆಚ್ಚು ಉತ್ತಮವಾಗುವ ಹಂತ ತಲುಪಿದೆ. ಲಸಿಕೆಯಿಂದ ಆಶಾದಾಯಕ ಮತ್ತು ಭರವಸೆದಾಯಕ ಜೀವನ ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು. ಲಸಿಕೆ ಮೂರನೇ ಡೋಸ್ ಕೊಡುವ ಪ್ರಸ್ತಾಪ ಸದ್ಯಕ್ಕಿಲ್ಲ ಎಂದರು.
ಕೋವಿಡ್ ನಿಯಂತ್ರಣ ಮತ್ತು ಜನರ ಜೀವನ ರಕ್ಷಣೆ ವಿಚಾರದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಶ್ರಮ ಹಾಗೂ ದೇಶದ ನಾಗರಿಕರ ಸಹಕಾರದಿಂದ 100 ಕೋಟಿ ಲಸಿಕೆ ಡೋಸ್ ಕೊಡಲು ಸಾಧ್ಯವಾಗಿದೆ. ಕೆಲವು ಮುಂದುವರಿದ ದೇಶಗಳಲ್ಲಿ ಶೇ 20ರಷ್ಟು ಲಸಿಕೆ ನೀಡುವ ಸಾಧನೆಯೂ ಆಗಿಲ್ಲ ಎಂದು ವಿಶ್ಲೇಷಿಸಿದರು.
ಜನರು ನರೇಂದ್ರ ಮೋದಿಯವರ ನಾಯಕತ್ವ ಮತ್ತು ಜನಪರ ಕಾರ್ಯಕ್ರಮಗಳ ಬಗ್ಗೆ ನಂಬಿಕೆ, ವಿಶ್ವಾಸ ಮತ್ತು ಭರವಸೆ ಹೊಂದಿರುವುದರ ಸಂಕೇತ ಇದಾಗಿದೆ. ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಯಡಿ ನಮ್ಮದೇ ಲಸಿಕೆಯನ್ನು ನಮ್ಮ ಜನರಿಗೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಅರ್ಹ 90 ಕೋಟಿ ಜನರ ಪೈಕಿ 70 ಕೋಟಿ ಜನರಿಗೆ ಈಗಾಗಲೇ ಮೊದಲನೇ ಲಸಿಕೆ ಕೊಡಲಾಗಿದೆ. ಸುಮಾರು 30 ಕೋಟಿ ಜನರಿಗೆ ಎರಡೂ ಲಸಿಕೆ ಕೊಡಲಾಗಿದೆ. 34,515 ಕೋಟಿ ರೂಪಾಯಿ ಒಟ್ಟು ವೆಚ್ಚವಾಗಿದೆ ಎಂದು ತಿಳಿಸಿದರು.
ದೀನದಲಿತರು, ವಂಚಿತರಿಗೆ ಮೊದಲ ಆದ್ಯತೆ ನೀಡಲಾಗಿದೆ. ಎಲ್ಲ ಜನರಿಗೆ ಯಾವುದೇ ತಾರತಮ್ಯವಿಲ್ಲದೆ ಲಸಿಕೆ ಕೊಡಲಾಗಿದೆ. ಸಮಾನತೆಯ ಸಂದೇಶ ಈ ಮೂಲಕ ಕೊಟ್ಟಿದ್ದೇವೆ. ವೈದ್ಯರು, ನರ್ಸ್‍ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದರು.
2021ರ ಜನವರಿ 16ರಂದು ಪ್ರಧಾನಿಯವರು ಲಸಿಕೆ ಬಿಡುಗಡೆ ಮಾಡಿದರು, ಆರಂಭದಲ್ಲಿ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ ಲಸಿಕೆ ಕೊಡಲಾಯಿತು. ನಂತರ ಮುಂಚೂಣಿ ಕಾರ್ಯಕರ್ತರು, ಮಾರ್ಚ್‍ನಲ್ಲಿ 60ರಿಂದ ಮೇಲ್ಪಟ್ಟ ವಯಸ್ಕರಿಗೆ, ಏಪ್ರಿಲ್‍ನಿಂದ 45 ವರ್ಷಕ್ಕೂ ಹೆಚ್ಚು ವಯಸ್ಸಿನವರಿಗೆ, ಮೂರನೇ ಹಂತದಲ್ಲಿ ಮೇ 2021ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಯಿತು ಎಂದ ಅವರು, ಜನವರಿ 2021ರಲ್ಲಿ 2.15 ಕೋಟಿ ಲಸಿಕೆ ನೀಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ 23.51 ಕೋಟಿ, ಅಕ್ಟೋಬರ್ ತಿಂಗಳ ಈವರೆಗೆ ಸುಮಾರು 26.61 ಕೋಟಿ ಲಸಿಕೆ ಕೊಡಲಾಗಿದೆ. ಮುಂದಿನ ತಿಂಗಳು ಇನ್ನೂ ಹೆಚ್ಚು ಲಸಿಕೆ ಕೊಡಲಾಗುವುದು ಎಂದರು. ಎಲ್ಲಿಯೂ ಲಸಿಕೆ ಕೊರತೆ ಇಲ್ಲ ಎಂದು ತಿಳಿಸಿದರು.
ಮಾಸ್ಕ್, ವೆಂಟಿಲೇಟರ್, ಆಮ್ಲಜನಕ, ಬೆಡ್‍ಗಳು ಸೇರಿದಂತೆ ಅನೇಕ ಸವಾಲುಗಳು ದೇಶದ ಮುಂದಿದ್ದವು. ಈ ಸವಾಲುಗಳಿಗೆ ಯಶಸ್ವಿಯಾಗಿ ದೇಶವು ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸ್ಪಂದಿಸಿದೆ. ಈಗ ಲಸಿಕೆಯನ್ನು ವಿಶ್ವದ ಇತರ ದೇಶಗಳಿಗೂ ಸರಬರಾಜು ಮಾಡಲಾಗುತ್ತಿದೆ ಎಂದರು.
ಇತರ ದೇಶಗಳಿಗೆ ಹೋಲಿಸಿದರೆ ವಿಶ್ವದಲ್ಲೇ ಕನಿಷ್ಠ ಸೋಂಕಿತರು, ಅತ್ಯಂತ ಕಡಿಮೆ ಸಾವಿನ ಪ್ರಮಾಣ ನಮ್ಮ ದೇಶದ್ದಾಗಿತ್ತು ಎಂದು ವಿವರಿಸಿದರು. ಭರವಸೆಯ ನಾಡು ನಮ್ಮದು, ಭಾರತ ಭರವಸೆಯ ದೇಶ ಎಂಬುದು ಇದರಿಂದ ಸಾಬೀತಾಗಿದೆ. ವಿಶ್ವಗುರುವಾಗುವತ್ತ ನಮ್ಮ ದೇಶ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಋಣಾತ್ಮಕ ಹೇಳಿಕೆ ನೀಡುವ ಮೂಲಕ ಏನು ತಿಳಿಸಲು ಹೊರಟಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಲಸಿಕೆ ಸಾಧನೆ ಬಗ್ಗೆ ವಿದೇಶಗಳ ನಾಯಕರೇ ಹೊಗಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಆರಂಭದ ದಿನಗಳಲ್ಲಿ ಲಸಿಕೆ ವಿರುದ್ಧ ಪ್ರಚಾರ ಮಾಡಿದ್ದರು ಎಂದು ನೆನಪಿಸಿದರು. ವಿಶ್ವವೇ ಬೆರಗಾಗುವ ಮಾದರಿಯಲ್ಲಿ 100 ಕೋಟಿ ಲಸಿಕೆ ನೀಡಿದ್ದು ಅಸಾಧಾರಣ ಸಾಧನೆ. ಅದನ್ನು ನಾವೀಗ ಆಚರಿಸುತ್ತಿದ್ದೇವೆ ಎಂದರು. ಸಿದ್ದರಾಮಯ್ಯ ಅವರು ಕೀಳುಮಟ್ಟದ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಮಳೆ ನಿಂತ ಕೂಡಲೇ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವುದು, ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. 3 ಜನ ವೈದ್ಯರು ಮತ್ತು ಇಬ್ಬರು ಪೌರಕಾರ್ಮಿಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎಂ. ಶಂಕರಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಬಿ. ನಾರಾಯಣ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ. ಮಂಜುನಾಥ್ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಎನ್. ಆರ್. ರಮೇಶ್, ಮಾಜಿ ಕಾರ್ಪೋರೇಟರ್ ಹೇಮಲತಾ ಶೇಟ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ