ಬೆಂಗಳೂರು: ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಿದ್ದಾರೆ ಎಂದಿರುವ ಸಿದ್ದರಾಮಯ್ಯ ಅವರು ದಲಿತರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರನ್ನು ಕಾಂಗ್ರೆಸ್ ತುಚ್ಛವಾಗಿ ಕಂಡಿದೆ. ಆದರೆ, ಬಿಜೆಪಿ ಮತ್ತು ಬಿಜೆಪಿ ಸರಕಾರಗಳು ದಲಿತರಿಗೆ ಗರಿಷ್ಠ ಅವಕಾಶ ನೀಡಿದ್ದು, ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ವಿವರಿಸಿದರು.
ದಲಿತರು ಮತ್ತು ಮುಸ್ಲಿಮರನ್ನು ಅಧಿಕಾರಕ್ಕಾಗಿ ಮಾತ್ರ ಇಟ್ಟುಕೊಂಡ ಪಕ್ಷ ಕಾಂಗ್ರೆಸ್. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಅವರನ್ನು ಮತಬ್ಯಾಂಕಾಗಿ ಮಾತ್ರ ಬಳಸಿಕೊಂಡಿತ್ತು. ಜಗಜೀವನರಾಂ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕಿತ್ತು. ಆದರೆ, ಅವರನ್ನು ಕಡೆಗಣಿಸಲಾಯಿತು. ಡಾ. ಅಂಬೇಡ್ಕರ್‍ರಿಗೆ ಭಾರತರತ್ನ ನೀಡಲಿಲ್ಲ. ದೆಹಲಿಯಲ್ಲಿ ಅವರ ಶವಸಂಸಾರಕ್ಕೆ ಕಾಲು ಎಕರೆ ಜಾಗ ಕೊಡಲಿಲ್ಲ. ಆದರೆ, ಕಾಂಗ್ರೆಸ್ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಗೆ ಶವಸಂಸ್ಕಾರಕ್ಕೆ 15 ಎಕರೆÉ ಜಾಗ ಕೊಡಲಾಗಿದೆ ಎಂದು ವಿವರಿಸಿದರು.
ದಲಿತರಿಗೆ ಅಕ್ಕಿ, ಪಡಿತರ ಚೀಟಿ, ಮೂಲ ವೇತನ, ಕುಡಿಯುವ ನೀರು, ಜಮೀನು, ಮನೆಗಳ ವಿತರಣೆ, ಜಮ್ಮು- ಕಾಶ್ಮೀರದಲ್ಲಿ ಮೀಸಲಾತಿ, ದಲಿತರ ಕಾಲೊನಿಗೆ ಸಿಮೆಂಟ್ ಕಾಂಕ್ರೀಟ್ ರಸ್ತೆ, ದಲಿತರಿಗೆ ಉದ್ಯೋಗದಂಥ ಹತ್ತಾರು ಅಭಿವೃದ್ಧಿ ಕ್ರಮವನ್ನು ಬಿಜೆಪಿ ಕೈಗೊಂಡಿದೆ. ಬಿಜೆಪಿಯಲ್ಲಿ ಗರಿಷ್ಠ ದಲಿತ ಜನಪ್ರತಿನಿಧಿಗಳಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸಿಂದಗಿಯ ಮಾದಿಗ ಸಮಾವೇಶದಲ್ಲಿ ದಲಿತರ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಅದರ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ ಎಂದರು. ಆದರೆ, ಈಗ ನಾನು ಆ ರೀತಿ ಹೇಳಿಲ್ಲ ಎನ್ನುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ತಕ್ಕುದಾಗಿ ನಡೆದುಕೊಳ್ಳುತ್ತಿಲ್ಲ. ಅವರು ಸಿದ್ದರಾಮಯ್ಯ ಅಲ್ಲ; ಅವರು ಸುಳ್ಳುರಾಮಯ್ಯ ಎಂದು ತಿಳಿಸಿದರು.
ಇಷ್ಟವಾಗದ ರಸ್ತೆ ಬದಲಿಸಿ; ಸಿದ್ಧಾಂತವನ್ನಲ್ಲ ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು. ದಲಿತರು ರಸ್ತೆ ಬದಲಿಸಿದ್ದಾರೆ. ಮೋಸ ಮಾಡುವ ಕಾಂಗ್ರೆಸ್ ಮುಖಂಡರಿಂದ ದೂರ ಹೋಗಿದ್ದಾರೆ ಎಂದರು. 70 ವರ್ಷಗಳ ಕಾಲ ದಲಿತರ ಹೊಟ್ಟೆ ಹಸಿವಿಗಾಗಿ ನೀವು ಏನು ಕೊಟ್ಟಿದ್ದೀರಿ? ನೀವು ಮತಬ್ಯಾಂಕಾಗಿ ದಲಿತರನ್ನು ಬಳಸಿಕೊಂಡಿದ್ದಲ್ಲವೇ? ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ ಅವರು, ದಲಿತರು ಕಾಂಗ್ರೆಸ್‍ಗೆ ಹೋದರೆ ಅದು ಅವರ ಆತ್ಮಹತ್ಯೆಗೆ ಸಮಾನ ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು ಎಂದು ನೆನಪಿಸಿದರು.
ಸಿದ್ದರಾಮಯ್ಯ ಅವರೂ ವಲಸೆ ಗಿರಾಕಿ. ಜನತಾದಳದಿಂದ ಬಂದು ಕಾಂಗ್ರೆಸ್ಸಿಗರನ್ನು ಮುಗಿಸಿ ಮುಖ್ಯಮಂತ್ರಿಯಾದವರು. ಕಾಂಗ್ರೆಸ್‍ನಲ್ಲಿ ಖರ್ಗೆ ಕಥೆ ಏನಾಗಿದೆ? ಕೇವಲ 250 ಮತಗಳ ಅಂತರದಿಂದ ಗೆದ್ದ ಸಿದ್ದರಾಮಯ್ಯ ದಲಿತ ಮುಖಂಡರನ್ನೆಲ್ಲ ಮುಗಿಸಿದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ ನಾಯಕತ್ವದ ಕೊರತೆಯನ್ನು ನೀವು ದುರ್ಬಳಕೆ ಮಾಡಿಕೊಂಡವರಲ್ಲವೇ? ಪಕ್ಷಕ್ಕೇ ಬ್ಲ್ಯಾಕ್‍ಮೇಲ್ ಮಾಡಿಲ್ಲವೇ? ದೊಡ್ಡ ಹೊಟ್ಟೆಯ ನೀವು ಕಾಂಗ್ರೆಸ್‍ಗೆ ಹೊಟ್ಟೆಪಾಡಿಗಾಗಿ ಹೋಗಿಲ್ಲವೇ? ಎಂದು ಕೇಳಿದರು.
ಕಾಂಗ್ರೆಸ್‍ನಲ್ಲಿ ದಲಿತರನ್ನು ಕೇಳುವವರೇ ಇರಲಿಲ್ಲ. ನಾವು ದಲಿತರಿಗೆ ಬಿಜೆಪಿಯಲ್ಲಿ ಅವಕಾಶ ಕೊಟ್ಟ ಬಳಿಕ ಕಾಂಗ್ರೆಸ್‍ನಲ್ಲಿರುವ ಧ್ರುವನಾರಾಯಣ್ ಸೇರಿ ಎಲ್ಲ ದಲಿತ ಮುಖಂಡರಿಗೆ ಫೋನ್ ಮಾಡಿ ಮಾತನಾಡಿಸುತ್ತಿದ್ದಾರೆ. ಸಿದ್ದರಾಮಯ್ಯರದು ನಿರಂತರ ದ್ವೇಷದ ರಾಜಕಾರಣ ಎಂದು ನುಡಿದರು.
ಖರ್ಗೆ, ಡಾ. ಪರಮೇಶ್ವರ್, ಶ್ರೀನಿವಾಸ ಪ್ರಸಾದ್ ಸೇರಿದಂತೆ ಹಲವರಿಗೆ ತೊಂದರೆ ಕೊಟ್ಟ ಸಿದ್ದರಾಮಯ್ಯರಿಗೆ ಮುಂದಿನ ಚುನಾವಣೆಗಳಲ್ಲಿ ಜನರು ಪಾಠ ಕಲಿಸಲಿದ್ದಾರೆ. ರಾಜಕೀಯ ಪುನರ್‍ಜನ್ಮ ಕೊಟ್ಟ ದೇವೇಗೌಡರನ್ನೂ ನಿಂದಿಸುವ ಪ್ರವೃತ್ತಿ ಸಿದ್ದರಾಮಯ್ಯರದು ಎಂದರು.
88 ಸಾವಿರ ಕೋಟಿಯನ್ನು ದಲಿತರ ಹೆಸರಿನಲ್ಲಿ ತೋರಿಸಿ ಮೆಟ್ರೊ ಮತ್ತಿತರ ಕಾಮಗಾರಿಗೆ ನೀವು ಬಳಸಿಕೊಂಡವರಲ್ಲವೇ? ಇದರಡಿ ಮೂರು ಕಾಸೂ ದಲಿತರಿಗೆ ಸೇರಿಲ್ಲ ಎಂದರು. ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ದಲಿತರಿಗೆ ಉದ್ಯಮ ಸ್ಥಾಪಿಸಲು ಗರಿಷ್ಠ ಪ್ರೋತ್ಸಾಹ ಕೊಟ್ಟಿದ್ದರು. ಪ್ರಧಾನಿಗಳಾದ ನರೇಂದ್ರ ಮೋದಿಯವರ ಪ್ರೋತ್ಸಾಹವೂ ಅನನ್ಯ. ಸಿದ್ದರಾಮಯ್ಯ ಹೃದಯದಲ್ಲಿ ದಲಿತ ವಿರೋಧಿ. ಆದರೆ, ಅವರ ಬಾಯಿಯಲ್ಲಿ ದಲಿತ ಪ್ರೇಮ. ಅವರೊಂದು ವಿಷಸರ್ಪವಿದ್ದಂತೆ. ಅವರು ಚೇಳಿನ ಪ್ರವೃತ್ತಿಯವರು ಎಂದು ಟೀಕಿಸಿದರು.
2013ರಿಂದ 2018ರವರೆಗೆ ನಿಮ್ಮ ಸರಕಾರ ಇತ್ತು. ನಿಮ್ಮ ಕಾಲದಲ್ಲಿ ಅತಿ ಹೆಚ್ಚು ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಸೋನಿಯಾ ಗಾಂಧಿ ಅವರನ್ನು ತೃಪ್ತಿ ಪಡಿಸಲು ನೀವು ಈ ಕ್ರಮ ಕೈಗೊಂಡಿದ್ದೀರಿ ಎಂದರು. ದಲಿತರ ಹೊಟ್ಟೆಪಾಡಿನ ಮಾತು ಹೇಳಿದ ಸಿದ್ದರಾಮಯ್ಯ ಅವರು ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ ಮತ್ತು ರಾಜ್ಯ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ