ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡವಿದೆ. ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಹ್ಯಾರಿಸ್ ಅವರ ಮೇಲೆ 2018ರ ಫೆಬ್ರವರಿಯಲ್ಲಿ ನಡೆದ ಹಲ್ಲೆಗೆ ಬಿಟ್ ಕಾಯಿನ್ ಮತ್ತು ಹವಾಲಾದ ಸಂಬಂಧವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಲೇ ಹೇಳಿಕೆ ನೀಡಿದ್ದರು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಗಮನ ಸೆಳೆದಿದ್ದಾರೆ.
ಬಳಿಕ ಕುಮಾರಸ್ವಾಮಿ ಅವರೇ ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದರು. ಆಗ ಈ ಪ್ರಕರಣವನ್ನು ತನಿಖೆ ಮಾಡಿಸಿ ಎಂದು ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒತ್ತಾಯಿಸಿಲ್ಲವೇಕೆ? ತಮ್ಮ ಇತರ ಬೆಂಬಲಿಗರ ಹೆಸರು ಹೊರಬೀಳಬಹುದೆಂಬ ಭಯ ಅವರಿಗೂ ಇತ್ತೇ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪ್ರಶ್ನಿಸಿದ್ದಾರೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧ ಶಾಮೀಲಾದ ಆರೋಪ ಹೊತ್ತ ಕಾಂಗ್ರೆಸ್ ಶಾಸಕರಾದ ಹ್ಯಾರಿಸ್ ಮತ್ತು ಲಮಾಣಿ ಅವರ ಮಕ್ಕಳನ್ನು ಬಂಧಿಸಲು ಸಿದ್ದರಾಮಯ್ಯ ಒತ್ತಾಯಿಸುತ್ತಿಲ್ಲವೇಕೆ ಎಂದೂ ಅವರು ಕೇಳಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಹೊರಬೀಳಬೇಕೆಂದು ಕಳಕಳಿ ಇದ್ದರೆ ಸಿದ್ದರಾಮಯ್ಯರವರು ಶ್ರೀಕಿ ಹೇಳಿದ ಕಾಂಗ್ರೆಸ್ ಶಾಸಕರ ಮಕ್ಕಳ ಬಂಧನಕ್ಕೆ ಒತ್ತಾಯಿಸುತ್ತಿದ್ದರು. ಆದರೆ, ಅವರು “ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು” ಎಂಬಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್‍ನವರದು ಸಾಕ್ಷ್ಯಾಧಾರ ನಾಶ, ತನಿಖೆ ಹಾದಿ ತಪ್ಪಿಸುವಲ್ಲಿ ಎತ್ತಿದ ಕೈ. ಡಿ.ಕೆ.ರವಿ ಸಾವಿನ ಪ್ರಕರಣದಲ್ಲೂ ಹೀಗೇ ಆಗಿದೆ. ತನ್ನ ಬಟ್ಟಲಿನಲ್ಲಿ ಹೆಗ್ಗಣ ಬಿದ್ದಿರುವಾಗ ಬೇರೆಯವರ ಗ್ಲಾಸಿನಲ್ಲಿ ನೊಣ ಬಿದ್ದಿದೆ ಎಂದು ಹೇಳಿ ಜಾರಿಕೊಳ್ಳುವ ಪ್ರವೃತ್ತಿ ಕಾಂಗ್ರೆಸ್ ಮುಖಂಡರದು ಎಂದೂ ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಏಳು ವರ್ಷಗಳ ಆಡಳಿತದ ಪರಿಣಾಮವಾಗಿ ದೇಶದೆಲ್ಲೆಡೆ ಕಾಂಗ್ರೆಸ್ ನಾಮಾವಶೇಷ ಆಗುವ ಸ್ಥಿತಿಗೆ ತಲುಪಿದೆ. ಇನ್ನೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 100 ದಿನಗಳ ಕಾಲ ಅತ್ಯುತ್ತಮ ಕಾರ್ಯಕ್ರಮ ನೀಡಿದ್ದಾರೆ. ಜನಪರ- ಜನಪ್ರಿಯ ಆಡಳಿತ ಅವರದು. ಇದನ್ನು ತಡೆದುಕೊಳ್ಳಲಾಗದೆ ಕಾಂಗ್ರೆಸ್‍ನವರು ಅನಗತ್ಯ ಹಾಗೂ ಆಧಾರವಿಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ರಚನಾತ್ಮಕ ಸಹಕಾರದ ಬದಲಾಗಿ ಹತಾಶೆಯ ಟೀಕೆಗೆ ತನ್ನನ್ನು ಸೀಮಿತಗೊಳಿಸಿದೆ ಎಂದು ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಡ್ರಗ್ಸ್ ಮಾಫಿಯಾ ಭೇದಿಸಿದ್ದರು. ಅದೊಂದು ದಿಟ್ಟ ಕ್ರಮ. ಡ್ರಗ್ಸ್ ಮಾಫಿಯಾ ಮಾತ್ರವಲ್ಲದೆ ಬಿಟ್ ಕಾಯಿನ್ ಹಿಂದೆ ಕಾಂಗ್ರೆಸ್ ಕಡೆ ಬೆಟ್ಟು ಮಾಡುವ ವಿಚಾರಗಳಿವೆ. ಕಾಂಗ್ರೆಸ್ ಶಾಸಕರ ಮಕ್ಕಳು, ಮಾಜಿ ಸಚಿವರ ಮೇಲೆ ಬರುವ ಆರೋಪಗಳನ್ನು ತಡೆಯಲು ಕಾಂಗ್ರೆಸ್ಸಿಗರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
2016-17 ರಲ್ಲಿ ಅವರು ಕಾಂಗ್ರೆಸ್‍ನ ಪ್ರಿಯಾಂಕ್ ಖರ್ಗೆ ಅವರು ಐಟಿಬಿಟಿ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಬಂಧಿತನಾಗಿದ್ದ ಶ್ರೀಕಿಯನ್ನು ಆಗ ಬಿಟ್ಟು ಕಳಿಸಿಯೂ ಆಗಿತ್ತು. ಹೋಟೆಲ್ ಅಶೋಕದಲ್ಲಿ ನಡೆದ ಕಾರ್ಯಾಗಾರದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಬಿಟ್ ಕಾಯಿನ್ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರು. ಬಿಟ್ ಕಾಯಿನ್ ಮತ್ತು ಕ್ರಿಪ್ಟೊ ಕರೆನ್ಸಿ ಬಗ್ಗೆ ತಿಳಿದುಕೊಂಡು ನಂತರ ಆ ಮಾಹಿತಿಯನ್ನು ಬಚ್ಚಿಟ್ಟದ್ದು ಯಾಕೆ? ಈ ಒಟ್ಟು ಬಿಟ್ ಕಾಯಿನ್ ದಂಧೆಯ ಕುರಿತು ಸವಿವರವಾದ ಪತ್ರಿಕಾ ಹೇಳಿಕೆಯ ನಂತರ ಮಾನ್ಯ ಪ್ರಿಯಾಂಕ್ ಖರ್ಗೆ ಅವರ ಜಾಣಮೌನ ಸಂಶಯದ ಹುತ್ತ ಕಾಂಗ್ರೆಸ್ ಮುಖಂಡರ ಸುತ್ತ ಸುತ್ತುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಮಾನ್ಯ ಸಿದ್ದರಾಮಯ್ಯ ಅವರೇ ಈ ಎಲ್ಲ ಗೊಂದಲಗಳು ನಿಮ್ಮ ಮೂಗಿನ ಕೆಳಗೆ, ನಿಮ್ಮ ಸರಕಾರದ ಅವಧಿಯಲ್ಲೇ ನಡೆದಿದ್ದು ನಿಮ್ಮ ಪಕ್ಷದ ರಾಷ್ಟ್ರೀಯ ಪ್ರಭಾರಿಗಳಾದ ಮಾನ್ಯ ಸುರ್ಜೇವಾಲಾರು ಹೇಳಿದಂತೆ 2016ರಿಂದ ನಡೆದಿರುವ ಈ ಅವ್ಯವಹಾರದ ಕುರಿತು ಸ್ಪಷ್ಟ ಮಾಹಿತಿಗಳು ಇದ್ದರೂ ಬೇಜವಾಬ್ದಾರಿಯ ನಿಮ್ಮ ಇಂದಿನ ನಡೆ ಕೋತಿ ತಾನು ತಿಂದು ಮೇಕೆಯ ಮೂತಿಗೆ ಒರೆಸಿದಂತೆ ಆಗಿಲ್ಲವೇ ಎಂದು ಪ್ರಶ್ನೆ ಹಾಕಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ