ಬೆಂಗಳೂರು: ಪ್ರಧಾನಿಯವರಿಗೆ ಸರಿಯಾದ ಭದ್ರತೆ ಒದಗಿಸದೆ ತನ್ನ ಕರ್ತವ್ಯದಿಂದ ವಿಮುಖವಾಗಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ಸರ್ಕಾರಿ ಯಂತ್ರವು ಖಲಿಸ್ತಾನ್ ಪರ ಅಂಶಗಳಿಂದ ಮುಕ್ತವಾಗುವವರೆಗೆ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯದ ರಾಜ್ಯಪಾಲರ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ರಾಜ್ಯದ ರಾಜ್ಯಪಾಲರಾದ ಥಾವರ್ ಸಿಂಗ್ ಗೆಹಲೋಟ್ ಅವರನ್ನು ಇಂದು ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದ ಬಿಜೆಪಿ ನಿಯೋಗವು ಭೇಟಿ ಮಾಡಿ ಈ ಕುರಿತಂತೆ ಮನವಿ ಸಲ್ಲಿಸಿತು. ರಾಜ್ಯದ ಸಚಿವರುಗಳಾದ ಡಾ.ಅಶ್ವಥ್ ನಾರಾಯಣ, ಎಸ್ ಟಿ ಸೋಮಶೇಖರ್ ಮತ್ತು ಬೈರತಿ ಬಸವರಾಜು ಅವರು ಈ ನಿಯೋಗದಲ್ಲಿದ್ದರು.
ಪಂಜಾಬ್ ಸರ್ಕಾರದ ಖಲಿಸ್ತಾನ್ ಮತ್ತು ಇತರ ಪಡೆಗಳೊಂದಿಗಿನ ಕ್ರಿಮಿನಲ್ ಬಾಂಧವ್ಯದ ಮೂಲಕ ಗೌರವಾನ್ವಿತ ಪ್ರಧಾನಮಂತ್ರಿಯವರನ್ನು ಗಂಭೀರವಾದ ಭದ್ರತಾ ಅಪಾಯಕ್ಕೆ ತಳ್ಳುವ ಉದ್ದೇಶಪೂರ್ವಕ ಪ್ರಯತ್ನ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತೆಯ ವಿಚಾರದಲ್ಲಿ ಅದು ನಿರ್ಲಕ್ಷ್ಯ ತೋರಿದೆ. ಖಲಿಸ್ತಾನ್ ಮತ್ತು ಭಾರತದ ಇತರ ಶತ್ರುÀ ಶಕ್ತಿಗಳೊಂದಿಗೆ ಅದರ ಸ್ಪಷ್ಟವಾದ ಸಹಭಾಗಿತ್ವವನ್ನು ಇದು ಸಾಬೀತು ಪಡಿಸುವಂತಿದೆ. ಇದಕ್ಕಾಗಿ ಪಂಜಾಬ್ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ಆಕ್ರೋಶವನ್ನು ವಕ್ತಪಡಿಸುವುದಾಗಿ ಮನವಿಪತ್ರ ತಿಳಿಸಿದೆ.
ನರೇಂದ್ರ ಮೋದಿಯವರು ಸೇರಿದಂತೆ ರಾಷ್ಟ್ರೀಯವಾದಿಗಳ ವಿರುದ್ಧ ದೇಶವಿರೋಧಿ ಶಕ್ತಿಗಳು ಸಂಚು ಹೂಡಿವೆ. ಇದಕ್ಕೆ ಅಲ್ಲಿನ ಸರಕಾರವು ಕೈಜೋಡಿಸಿದೆ. ಇದು ಸಂಪೂರ್ಣವಾಗಿ ಆತಂಕಕಾರಿ ಮತ್ತು ಅಪಾಯಕಾರಿ ಆಯಾಮವಾಗಿದೆ, ಈ ಕ್ರಮ ಅಸ್ವೀಕಾರಾರ್ಹ ಮಾತ್ರವಲ್ಲದೆ ಅತ್ಯಂತ ಖಂಡನೀಯ ಎಂದು ತಿಳಿಸಲಾಗಿದೆ.
ಎಸ್‍ಪಿಜಿಗೆ ಪಂಜಾಬ್‍ನ ಡಿಜಿಪಿ ಅನುಮತಿ ನೀಡಿದ ನಂತರವೇ ಪ್ರಧಾನಿಯವರು ಭಟಿಂಡಾ ವಾಯುನೆಲೆಯಿಂದ ರಸ್ತೆ ಮೂಲಕ ತೆರಳಿದರು. ಪ್ರತಿಕೂಲ ಹವಾಮಾನದಿಂದಾಗಿ ಪ್ರಧಾನಮಂತ್ರಿಯವರ ಹೆಲಿಕಾಪ್ಟರ್ ಟೇಕ್ ಆಫ್ ಆಗಲಿಲ್ಲ. ಪಂಜಾಬ್ ಪೊಲೀಸ್ ಮತ್ತು ಪಂಜಾಬ್ ಸರ್ಕಾರದ ಎಲ್ಲಾ ಅನುಮತಿಗಳನ್ನು ಪಡೆದ ನಂತರ ಪ್ರಧಾನಿಯವರ ಬೆಂಗಾವಲು ಪಡೆ ಭಟಿಂಡಾದಿಂದ ರಸ್ತೆಯ ಮೂಲಕ ಹೊರಟಿತ್ತು ಎಂದು ವಿವರಿಸಲಾಗಿದೆ.
ಎಸ್‍ಪಿಜಿ, ಪ್ರಧಾನಿಗೆ ನಿಕಟ ಭದ್ರತೆಯನ್ನು ಒದಗಿಸುತ್ತದೆ ಎಂಬುದು ಸತ್ಯ. ಇದು ಭಯೋತ್ಪಾದಕರು ಮತ್ತು ಕ್ರಿಮಿನಲ್ ಉದ್ದೇಶವನ್ನು ಹೊಂದಿರುವ ವ್ಯಕ್ತಿಗಳನ್ನು ಪ್ರಧಾನಿಯ ಹತ್ತಿರ ಬರುವುದನ್ನು ತಡೆಯಲು ಮಾತ್ರ. ಆದಾಗ್ಯೂ, ರಸ್ತೆ ಕ್ಲಿಯರೆನ್ಸ್ ಒದಗಿಸುವುದು, ಜೀರೋ ಟ್ರಾಫಿಕ್ ನೀಡುವುದು ಮತ್ತು ಪ್ರಧಾನಿ ಹೋಗುವ ಮಾರ್ಗದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದು ಮತ್ತು ಇತರ ಪೂರಕ ಭದ್ರತಾ ವ್ಯವಸ್ಥೆಗಳು ರಾಜ್ಯ ಪೊಲೀಸರ ಜವಾಬ್ದಾರಿಯಾಗಿದೆ. ಈ ಸಂದರ್ಭದಲ್ಲಿ, ಪಂಜಾಬ್ ಪೊಲೀಸರು ಮತ್ತು ಸಾಮಾನ್ಯವಾಗಿ ಪಂಜಾಬ್ ಸರ್ಕಾರವು ಹೆದ್ದಾರಿಯನ್ನು ತೆರವುಗೊಳಿಸದೆ ಗಂಭೀರ ಲೋಪ ಎಸಗಿವೆ. ಇದು ರಸ್ತೆ ತಡೆಗೆ ಕಾರಣವಾಯಿತು ಮತ್ತು ಪ್ರಧಾನಿ ಅವರು ಹೆದ್ದಾರಿಯಲ್ಲಿ 20 ನಿಮಿಷಗಳ ಕಾಲ ಕಳೆಯಬೇಕಾಯಿತು ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಭಟಿಂಡಾ ಮತ್ತು ಇತರ ನೆರೆಯ ಪ್ರದೇಶಗಳು ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿದೆ. ಪಾಕಿಸ್ತಾನದಿಂದ ಕ್ಷಿಪಣಿ ದಾಳಿ ನಡೆದಿದ್ದರೆ ಅಥವಾ ಆತ್ಮಹತ್ಯಾ ಬಾಂಬರ್ ಅಡಗಿಕೊಂಡಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು ಎಂದು ಗಮನ ಸೆಳೆಯಲಾಗಿದೆ. ಪ್ರಧಾನಿಯವರ ಭದ್ರತೆಯ ವಿಚಾರದಲ್ಲಿ ವಿಫಲವಾಗಿರುವ ಪಂಜಾಬ್ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಬೇಕೆಂದು ಕರ್ನಾಟಕ ಬಿಜೆಪಿ ಆಗ್ರಹಿಸುತ್ತದೆ. ಪಂಜಾಬ್ ಸರ್ಕಾರವು ಪ್ರಧಾನಿಯವರ ಜೀವದ ವಿಚಾರದಲ್ಲಿ ಚೆಲ್ಲಾಟವಾಡಲು ಮುಂದಾಗಿತ್ತು. ಪ್ರಧಾನಿಯವರು ಸುರಕ್ಷಿತವಾಗಿ ದೆಹಲಿಗೆ ಮರಳುವುದು ದೇವರ ಇಚ್ಛೆ ಮಾತ್ರ. 130 ಕೋಟಿ ಭಾರತೀಯರ ಸಾಮೂಹಿಕ ಪ್ರಾರ್ಥನೆಯೇ ಪ್ರಧಾನಿಯವರ ಜೀವ ಉಳಿಸಿದೆ ಎಂದು ಮನವಿ ತಿಳಿಸಿದೆ.
ಪ್ರಧಾನಿ @narendramodi ಅವರ ಭದ್ರತೆಯಲ್ಲಿ ಲೋಪ ಎಸಗಿರುವ ಪಂಜಾಬ್ ಸರಕಾರವನ್ನು ವಜಾಗೊಳಿಸಬೇಕು ಮತ್ತು ಖಲಿಸ್ತಾನದ ಪರ ಮನಸ್ಥಿತಿಯ ಪಂಜಾಬಿನಲ್ಲಿ ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆ ವಿಧಿಸಬೇಕು ಎಂದು ರಾಜ್ಯಪಾಲರ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.@drashwathcn @STSomashekarMLA @BABasavaraja pic.twitter.com/rSMAIwGdku
— Nalinkumar Kateel (@nalinkateel) January 7, 2022
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ