ಬೆಂಗಳೂರು: ಬಾಂಬ್, ಬಂದೂಕು, ಪಿಸ್ತೂಲ್ ಆತಂಕವಾದದ ಜೊತೆಗೂಡಿವೆ. ಇನ್ನೊಂದು ಪ್ರಮುಖ ರೀತಿಯ ನೂತನ ಭಯಾನಕ ಭಯೋತ್ಪಾದನೆಯ ವ್ಯವಸ್ಥೆಯನ್ನು ‘ಕೇರಳ ಸ್ಟೋರಿ’ ಅನಾವರಣಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಿಳಿಸಿದರು.
ಎಂ.ಜಿ. ರಸ್ತೆಯಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ “ದಿ ಕೇರಳ ಸ್ಟೋರಿ” ಸಿನಿಮಾವನ್ನು ವೀಕ್ಷಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕೇರಳದ ಈ ಭಯಾನಕ ವ್ಯವಸ್ಥೆಯು ಕೇರಳ ಸ್ಟೋರಿಯಲ್ಲಿದೆ ಎಂದರು.
ಹೊಸ ಥರದ ಆತಂಕವಾದದ ಬಗ್ಗೆ ಈ ಸಿನಿಮಾ ಮಾಹಿತಿ ಕೊಡುತ್ತಿದೆ. ಯುವಜನರನ್ನು ಪ್ರಾಯೋಜಿತ ರೀತಿಯಲ್ಲಿ ಆತಂಕವಾದದತ್ತ ಸೆಳೆಯುವುದನ್ನು ಈ ಸಿನಿಮಾ ತೋರಿಸುತ್ತದೆ. ಭಯೋತ್ಪಾದನೆಯ ದಾರಿಯಲ್ಲಿ ನಡೆದ ಯುವಜನರು ಮತ್ತೆ ಹಿಂತಿರುಗಲಾಗದ ಹಂತ ತಲುಪುತ್ತಾರೆ ಎಂದು ವಿಶ್ಲೇಷಿಸಿದರು.
ಈ ಸಿನಿಮಾ ವೀಕ್ಷಿಸಿ ಸಮಾಜದ ಹೆಚ್ಚು ಹೆಚ್ಚು ಜನರು ಈ ಷಡ್ಯಂತ್ರದ ಕುರಿತು ಜಾಗೃತಗೊಳ್ಳಲಿ. ಇದಕ್ಕೆ ಧರ್ಮ, ಒಂದು ರಾಜ್ಯ ಎಂಬ ಸೀಮಿತತೆ ಇಲ್ಲ. ಕೇರಳದ ಈ ಗಂಭೀರ ಸಮಸ್ಯೆ ಕುರಿತು ಅಲ್ಲಿನ ಮಾಜಿ ಮುಖ್ಯಮಂತ್ರಿಯೂ ಆತಂಕ ಸೂಚಿಸಿದ್ದಾರೆ ಎಂದರು.
ನಮ್ಮ ಸಮಾಜವನ್ನು ದುರ್ಬಲಗೊಳಿಸಲು ನಡೆಯುವ ಷಡ್ಯಂತ್ರದ ವಿಷಯವನ್ನು ಇದು ತಿಳಿಸಿದೆ. ನಾನು ಈಗಾಗಲೇ ಸಿನಿಮಾ ವೀಕ್ಷಿಸಿದ್ದೇನೆ ಎಂದು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಸಂಸದ ತೇಜಸ್ವಿಸೂರ್ಯ, ರಾಷ್ಟ್ರೀಯ ವಕ್ತಾರ ಜಾಫರ್ ಇಸ್ಲಾಂ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರೂ ನಡ್ಡಾ ಅವರ ಜೊತೆ ಈ ಸಿನಿಮಾ ವೀಕ್ಷಿಸಿದರು.