ಬಿಜೆಪಿ ಪಕ್ಷದವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ, ನಾವು ಐದು ಗ್ಯಾರಂಟಿಗಳನ್ನು ನೀಡಿ ಮತ ಕೇಳುತ್ತಿದ್ದೇವೆ. ನಿಮ್ಮ ಮತ ಅಕ್ಷತೆ ಕಾಳಿಗೋ ಅಥವಾ ಐದು ಗ್ಯಾರಂಟಿಗಳಿಗೋ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ಬಾಲಕೃಷ್ಣರೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತ ಅಕ್ಷತೆ ಕಾಳಿನ ಪರವಾಗಿಯೇ ಇರುತ್ತದೆ, ಏಕೆಂದರೆ ಆ ಅಕ್ಷತೆ ಅಕ್ಕಿಯ ಹಿಂದೆ ನಮ್ಮವರ ಬಲಿದಾನ, ತ್ಯಾಗ, ಶೌರ್ಯವಿದೆ. ನಾವು ಐದು ವರ್ಷದ ಅವಧಿಯ ಸರ್ಕಾರದ ಗ್ಯಾರಂಟಿಗಳಿಗೆ ಮರುಳಾಗುವ ಜನರಲ್ಲ ನಾವು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಿದ್ದರೆ ಗ್ಯಾರಂಟಿ ಯೋಜನೆಗಳು ರದ್ದಾಗಲಿವೆ ಎಂದೂ ನೀವು ಹೇಳಿದ್ದೀರಿ. ಇದು ನಿಮ್ಮ ಮತ್ತು ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯ ಭಾಗವಾಗಿದೆ. ಅಕ್ಷತೆ ಕಾಳಿಗೂ, ಗ್ಯಾರಂಟಿ ಯೋಜನೆಗಳಿಗೂ ಒಂದಕ್ಕೊಂದು ಸಂಬಂಧ ಕಲ್ಪಿಸುವ ಮೂಲಕ ಕಾಂಗ್ರೆಸ್ ಪಕ್ಷವೇ ಅಯೋಧ್ಯೆಯನ್ನು ಚುನಾವಣಾ ವಿಷಯವನ್ನಾಗಿ ಮಾಡುತ್ತಿದೆ.
ಶ್ರೀರಾಮ ಮಂದಿರ ಲೋಕಾರ್ಪಣೆಯ ಕಾರ್ಯಕ್ರಮವನ್ನು ಜಗತ್ತು ಸಂಭ್ರಮಿಸಿದೆ, ಭಾರತವಂತೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಈ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಂಡಿದೆ. ಅಯೋಧ್ಯ ಲೋಕಾರ್ಪಣೆಯ ದಿನ ರಾಮಜ್ಯೋತಿ ಬೆಳಗುವ ಮೂಲಕ ದೇಶ ಸಂಭ್ರಮಿಸಿತ್ತು. ರಾಮಮಂದಿರ ಲೋಕಾರ್ಪಣೆಗೆ ಮುನ್ನ ದೇಶಾದ್ಯಂತ ರಾಮ ಮಂತ್ರಾಕ್ಷತೆಯ ವಿತರಣೆ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ದೇಶದ ಎಲ್ಲಾ ಮನೆಮನೆಗಳು ವಿತರಿಸುವ ಕಾರ್ಯ ಮಾಡಿತ್ತು, ಇದಕ್ಕೆ ಬಿಜೆಪಿ ಪಕ್ಷ ಕೂಡ ಜೊತೆಯಾಗಿತ್ತು.
ವ್ಯಾಪಕ ಜನಬೆಂಬಲ ಪಡೆದ ಈ ಕಾರ್ಯವನ್ನು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಕಾಂಗ್ರೆಸ್ ನಾಯಕರು ನಿಮ್ಮ ಮತ ಅಕ್ಷತೆಯ ಕಾಳಿಗೋ ಅಥವಾ ಕಾಂಗ್ರೆಸ್ ಗ್ಯಾರಂಟಿಗಳಿಗೋ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ನಾಯಕರ ಪ್ರಕಾರ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲದಿದ್ದರೆ ಕಾಂಗ್ರೆಸ್ ಘೋಷಿಸಿದ ಉಚಿತ ಗ್ಯಾರಂಟಿಗಳು ರದ್ದಾಗಲಿವೆಯಂತೆ.
ಈಗಾಗಲೇ ಮೋದಿ ಅಲೆ ಎದ್ದು ಮೋದಿ ಪರವಾದ ಆಡಳಿತ ಕ್ಕೆ ಜನರು ಮೆಚ್ಚಿದ್ದು ಈ ಬಾರಿಯೂ ಸ್ಪಷ್ಟ ಬಹುಮತಗಳೊಂದಿಗೆ ಮೋದಿ ಸರ್ಕಾರವೇ ಆಡಳಿತಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಹಿಂದೂ ವಿರೋಧಿ ನೀತಿಯಿಂದಾಗಿ ಕಾಂಗ್ರೆಸ್ ನೆಲಕಚ್ಚುವ ಎಲ್ಲಾ ಲಕ್ಷಣ ಕಾಣುತ್ತಿದೆ. ಹೀಗಿರುವಾಗ ಗ್ಯಾರಂಟಿಗಳನ್ನು ಗುರಾಣಿಯಾಗಿಸಿಕೊಂಡು ಮತಬೇಟೆಯಾಡುವ ಕಾಂಗ್ರೆಸ್ ಉದ್ದೇಶ ಎಂದೂ ಸಫಲವಾಗದು.